Friday, 20 February 2015

ಬೆಂಕಿ ಬುತ್ತಿ


ಭೂಮಿ ಮಣ್ಣು ಮುಕ್ಕಿ
ಬಾನು ನೀರು ಕುಡಿದು
ಗಾಳಿ ಉಸಿರಾಡುತ್ತಿದೆ

ಮೇಣ ಮತ್ತೆ ಬೆಳಗಿ
ಬೆಳಕು ಮತ್ತೆ ಜನಿಸಿ
ಏಕಾಂತ ಜ್ವಲಿಸುತ್ತಿದೆ

ನೆರಳು ಒಮ್ಮೆ ಬೆಚ್ಚಿ
ಕೊರಳು ಚೂರು ಕಿವುಚಿ
ಮೌನ ಮಾತಾಗಿದೆ

ತೆರೆದ ಕಣ್ಣು ಸತ್ಯ
ಕಂಡ ಸುಳ್ಳು ಸಾಕ್ಷಿ
ಬಿಡುವು ಬೇಡುತ್ತಿದೆ

ಸ್ವತಂತ್ರತೆ ಸ್ವತಂತ್ರವಲ್ಲ
ಹೆಜ್ಜೆಜ್ಜೆಗೂ ತೊಡಕು
ಬಂಧನ ಬೇಕನಿಸಿದೆ

ಪ್ರಾಣ ನಿರಾಕಾರ
ಮನಸು ನಿರ್ವಿಕಾರ
ಆತ್ಮ ತೂಕಡಿಸಿದೆ

ಖಾಲಿ ಕೈಯ್ಯೊಳು ಪತ್ರ
ಅದರೊಳು ಅಳಿದ ಅಕ್ಷರ
ಶಾಯಿ ಮುಗಿದ ಲೇಖನಿ

ದಾರಿ ಜೊತೆಗಿನ ಗುಟ್ಟು
ಮಿಡಿತ ಸುಗಮ ಸಂಗೀತ
ಹಾಡು ಆಕಳಿಸುತ್ತಿದೆ

ನಾನು ಪ್ರಶ್ನೆಗೆ ಪ್ರಶ್ನೆ
ನಾನು ನಿರುತ್ತರ
ನಾನು ನನ್ನ ಬೆಂಬಲದಿ
ನನ್ನನ್ನೇ ಕಾಡುವ ವೈರಿ!!

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...