ಎಲ್ಲಿಯೂ ನಿಲ್ಲದೆ

ದಾರಿ ಸ್ಥಾವರವಾಗಿದ್ದು
ಜಂಗಮದ ಪಾಠ ಕಲಿಸಿತು
ತೂಕಡಿಸುತ್ತಿದ್ದ ಮಂಡೂಕಕ್ಕೆ
ಕುಪ್ಪಳಿಸುವ ಹುರುಪು ತುಂಬಿ

ದಾಸಯ್ಯನ ಶಂಖ, ಜಾಗಟೆಯ ಸದ್ದು
ಊರಾಚೆ ಕೆರೆಗೆ ಕೇಳುತ್ತಲೇ
ತರಂಗಗಳ ಮೇಲೆ ನೀರ್ಗುಳ್ಳೆಗಳು ಸಾಗಿ
ದಡ ಮುಟ್ಟುತ್ತ ಒಡೆದು ಹೋದವು

ಇಳಿಜಾರಿಗೆ ಸಿಕ್ಕಿದ ಹಣ್ಣೆಲೆ
ಕಣಿವೆಯ ಕಾಲುವೆಯಲ್ಲಿ
ಕುಂಟು ಹೆಜ್ಜೆ ಇಕ್ಕುತ್ತಲೇ
ಪಾಚಿಗಟ್ಟಿ ಮತ್ತಾವುದೋ ಮರದ
ಬುಡಕೆ ಆಹಾರವಾಯಿತು

ಮುಗಿಲು ಕಡಲ ಬಸಿದು
ಹಸಿದ ನೆಲವ ಮುತ್ತಿಕ್ಕುವಾಗ
ಸತ್ತೇ ಹೋಗಿದ್ದ ಬೀಜಕ್ಕೆ
ಮತ್ತೊಮ್ಮೆ ಚಿಗುರುವ ಬಯಕೆ

ಮಸಿಯಿಂದ ಅಕ್ಷರ ರೂಪ ತಾಳಿ
ಮೂಡಿದ ಪದ ಗುಚ್ಚಕ್ಕೆ
ಸೋಲಗಿತ್ತಿ ಇಲ್ಲದ ಪ್ರಸವ
ಅರಳಿದ್ದು ಅನನ್ಯ ಭಾವ ಹೂವ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩