ನನ್ನಪ್ಪ

ಸುಳ್ಳು ಹೆಳುತ್ತಿದ್ದಾನೆ ಪಾಪ
ಅವನ ಕಣ್ಣಿನ ಸಾಚಾತನ
ಅವನ ಸುಳುಗಳಿಗೆ ಬಣ್ಣ ಹಚ್ಚದೆ
ಎಲ್ಲವನ್ನೂ ಬೆತ್ತಲಾಗಿಸುತ್ತಿದ್ದವು
ಹರಿದರೂ ಬಿಡದೆ ಮತ್ತೆ ಮತ್ತೆ ಹೊಲಿದ
ಪಟಾಪಟ್ಟಿ ಚಡ್ಡಿಯ ಜೇಬು
ಎಂದೂ ಅಷ್ಟೇನೂ ಭಾರವಾಗುತ್ತಿರಲಿಲ್ಲ,
ಆದರೂ ಹರಿದ ದಿನ ಮಾತ್ರ
ಕೈ ತುಂಬ ಕಾಸು
ಅದೇ ಚಿಂತೆಯಲಿ ತೇಪೆ ಹಾಕುತ್ತಾನೆ
ಸಾಲದ ಸೀಳಿಗೆ ತಾತ್ಕಾಲಿಕ ತೆರೆ
ಕೋಳಿ ತೂಕಡಿಸುತ್ತಿದ್ದ ದಿನ
ಕಳೆದುಕೊಂಡ ಭಾನುವಾರಗಳ
ನೀರಸ ತಿಳಿಸಾರು ಮುದ್ದೆ ನೆನಪಾಗಿ
ಅಂದು ಶನಿವಾರ ಮಂಕಾಗುತ್ತಾನೆ,
ನಾಳೆಯೊಳಗೆ ಕೋಳಿ ಸಾಯಬಹುದು!!
ಅಪ್ಪನ ಜುಗ್ಗತನವೇ ಹಾಗೆ
ಒಂದಕ್ಕೆ ಮೂರರಷ್ಟು ನಷ್ಟ
ಆಗ ಅವ ಪಡುವ ಸಂಕಟ ವಿವರಿಸುವುದು
ಅಬ್ಬಬ್ಬಾ ಕಷ್ಟ-ಕಷ್ಟ!!
"ಮಗ ಸಂಬಳ ಎಷ್ಟು ತರುತ್ತಾನೆ?"
ಗುಟ್ಟಾಗಿ ಅಮ್ಮನ ಬಳಿ ಕೇಳಿದ್ದನ್ನ
ನನಗೆ ಗೊತ್ತಾಗದಂತೆ ಪ್ರಮಾಣ ಮಾಡಿಸಿಕೊಂಡಿಯೂ
ಅಮ್ಮ ನನ್ನ ಮುಂದೆ ಬಾಯ್ಬಿಟ್ಟಾಗ
ಇಬ್ಬರೂ ಬ್ಲಾಕ್ ಅಂಡ್ ವೈಟ್ ಫೋಟೋದಲ್ಲಿ
ಮುಗ್ಧರಂತೆ ನಕ್ಕಷ್ಟು ಖುಷಿಯಾಗುತ್ತೆ
ವಾದದಲಿ ಸೋಲುವ ಮೊದಲೇ
ಇನ್ಯಾವುದೋ ಕೆಲಸಕ್ಕೆ ಬಾರದ ಚರ್ಚೆ,
ಎಷ್ಟೋ ಬಾರಿ ಇಂದು ಬಿಟ್ಟ ಟಾಪಿಕ್ಕು
ಮತ್ತೆಂದೋ ಮತ್ತೆ ಮುಂದುವರಿಯುತ್ತೆ;
ಅಪ್ಪನ ಜಗಳವೇ ಹಾಗೆ
ಲಾಜಿಕ್ಕಿಲ್ಲದ ಸೂತ್ರಗಳು,
ಅದು ಗೊತ್ತಿದ್ದೂ ಹೂಡುತ್ತಾನೆ
ಥೇಟು ನನ್ನಂತೆಯೇ!!
ಸಿಟ್ಟು ತರಿಸುತ್ತಾನೆ 
ಅಮ್ಮನ ಮೇಲೆ ದಬ್ಬಾಳಿಕೆ ಮೆರೆದು,
ಅಷ್ಟೇನೂ ಕೋಪಿಷ್ಟನಲ್ಲ
ಆದರೂ ಎನೋ ದರ್ಪ;
ಅಮ್ಮನಿಗೆ ಗೊತ್ತಿಲ್ಲದ್ದೇನಿದೆ
ಎಲ್ಲವನ್ನೂ ಸಹಿಸುತ್ತಾಳೆ
ಅಪ್ಪನ ಭುಜವ ಮೀರಿದ ಭುಜಗಳು
ಬಾಗಲು ಕಲಿಯದೆ
ಅವನ ಸಮಕ್ಕೆ ಚಿಂತಿಸಲಾರವು,
ಒಮ್ಮೊಮ್ಮೆ ಅವನಲ್ಲಿಯ ದುಷ್ಟ
ನನ್ನಲಿಯವನ ಕಿವಿ ಹಿಂಡುತ್ತಾನೆ
ಅವನಲ್ಲಿಯ ಧ್ಯಾನಿ
ನನ್ನ ತಟಸ್ಥನಾಗಿಸುತ್ತಾನೆ!!

                             -- ರತ್ನಸುತ

Comments

  1. ಅದಕಾಗಿಯೇ ಅಪ್ಪನನ್ನು ವಿಶಾಲ ಆಕಾಶಕ್ಕೆ ಹೋಲಿಸುವುದು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩