ಆಮೆ ಓಟ

ಸ್ವಲ್ಪ ವಿರಾಮದ ಬಳಿಕ
ಒಂದು ಹೆಜ್ಜೆ ಇಟ್ಟಾಗ
ರಸ್ತೆ ಉತ್ಸುಕತೆಯಿಂದ
ಬೊಗಸೆ ಮಾಡಿ ಪಾದವ ಅಪ್ಪಿತು;
ಕಾಯುವಿಕೆಯ ಫಲವೇ?


ಬರುವೆನೆಂದು ನಂಬಿಸಿ
ಬಾರದೆ ಇದ್ದ ಪಕ್ಷದಲ್ಲಿ
ತೊರೆದ ಸಹಸ್ರಾರು ಬಂಧಗಳು
ಈಗ ಬಿಕ್ಕಳಿಸಲಿ;
ಪ್ರಾಣ ತಗೆವಂತೆ ಮನ ಅವರ ನೆನೆಯುತ್ತದೆ!!


ಆಲಸ್ಯದ ಪಯಣವನ್ನ
ಸಹಿಸಲಾಗದೆ ಬೇಸತ್ತು
ನೆರಳಿನ್ನೂ ಮುಂದುವರಿದಾಗ
ದೇಹ ಮುಪ್ಪಿನ ಅಂಚು,
ನೆರಳು ಪ್ರಾಯದ ಕುದುರೆ


ಸೂರ್ಯನ ಶಾಖಕ್ಕೆ ಬೆಂದ ಕಣ್ಣು
ದೂರ ತಿರುವುಗಳನ್ನ ಗ್ರಹಿಸಿ
ಅದೇ ಭೂಮಿಯ ಕೊನೆಯೆಂದು
ತುಸು ಬೇಗನೆ ಹೆಜ್ಜೆ ಹಾಕಿದರೆ?
ಹುಸಿಯಾದ ನಿರೀಕ್ಷೆಯಲಿ ಕಹಿಯ ಭಾರ!!


ಜೊತೆಗಿದ್ದವರೆಲ್ಲ ಬಿಟ್ಟು ಹೋದರೆಂದಮಾತ್ರಕ್ಕೆ
ನೋವು ಕೊಟ್ಟು ಹೋದರೆಂದಲ್ಲ;
ಹಿಂದಿಕ್ಕಿದ್ದು ಅವರ ನಿಪುಣತೆ
,
ಯಾವ ತಕರಾರನ್ನೂ ತಗೆಯದೆ

ಮನಸು ನಿಚ್ಚಲವಾಗಿ ದಿಟ್ಟಿಸಿತು ಗೆಲುವಿನ ಓಟವ
ಗೆದ್ದವರಿಗೆಲ್ಲಿ ಅನುಭವ!!

ಕೆಲ ತಾಸುಗಳುರುಳಿ
ಮತ್ತೊಂದು ಹೆಜ್ಜೆ ಇಡುವ ಹೊತ್ತು,
ಈಗಿಡುವ ಕಾಲಿಗೆ ಜೋಮು

ಮತ್ತೊಂದಕ್ಕೆ ಚಳುಕು
ಎರಡನ್ನೂ ಆಸ್ವಾದಿಸುವುದೇ ಬದುಕು!!

-- ರತ್ನಸುತ

Comments

  1. ಅಸಲು ಕೂತು ಕೂತೇ ಜೋಮೆದ್ದ ನನ್ನಂತಹ ಆಮೆಗಳಿಗೂ ಚುರುಕು ಮುಟ್ಟಿಸುವಂತಿದೆ! ಭೇಷ್ ಕಾವ್ಯ ಛಾಟಿಗೆ...

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩