ಒಂದು ಲೆಕ್ಕದ ಆಟ

ಪಾರ್ಕಿನ ಬೆಂಚುಗಳ ಬೆಚ್ಚಗಿರಿಸಿ
ಕಾಲಹರಣ ಮಾಡಿದ್ದು ಲೆಕ್ಕಕ್ಕಿಲ್ಲ
ಹಾಸಿಗೆಯ ಚಾದರವ ಮುದ್ದೆ ಮಾಡಿ
ಒದ್ದಾಡಿ ನಿದ್ದೆ ಮರೆತದ್ದು ಲೆಕ್ಕಕ್ಕಿಲ್ಲ
ಬಿಸಿ ಚಹ ತುಟಿಯ ಸುಟ್ಟಾಗ ನೋವಿನಿಂದ
ನರಳದೆ ನಕ್ಕ ದಿನಗಳು ಲೆಕ್ಕಕ್ಕಿಲ್ಲ
ಹಸಿವ ಮರೆತು ಸರದಿ ಕನಸುಗಳ ಕಾಣುವಾಗ
ಲೋಕ ಮರೆಸಿದ ಉನ್ಮತ್ತ ಕ್ಷಣಗಳು ಲೆಕ್ಕಕ್ಕಿಲ್ಲ

ಯಾವ ಲೆಕ್ಕದ ಬಗ್ಗೆ ಮಾತನಾಡುತ್ತಿರುವೆ?
ಕೊಟ್ಟದ್ದೋ? ಪಡೆದದ್ದೋ
?
ಕೊಟ್ಟವುಗಳು ನನ್ನವಲ್ಲ ನಿನ್ನವು

ಪಡೆದವುಗಳು ನಿನ್ನವಲ್ಲ ನನ್ನವು!!

ಇರುಳೆಲ್ಲ ವ್ಯಯಿಸಿ ಲೆಕ್ಕವಿಟ್ಟ ಚುಕ್ಕಿಗಳ
ಲೆಕ್ಕ ಪುಸ್ತಕವನ್ನೇ ಕೊಡುತ್ತೇನೆ
ಕೂಡಿಸಿ ಪರಾಮರ್ಶಿಸಿ ನೋಡು
ನಿನ್ನ ಲೆಕ್ಕದೊಡನೆ
ಅಲ್ಲೆ ತೀರ್ಪು ಹೊರಬೀಳಲಿ
ನನ್ನ ಸಾಚಾತನದ ಕುರಿತು

ಕಣ್ಣೀರ ಲೆಕ್ಕ? ಅಳತೆಗೆ ನಿಲುಕದ್ದು
ಎಷ್ಟು ಕರವಸ್ತ್ರಗಳು ನೆಂದವೋ ಲೆಕ್ಕಕ್ಕಿಲ್ಲ
ಇನ್ನು ಹನಿ ಹನಿಯ ಎಣಿಸಿದ್ದರೆ
ಅಂಕಿ ಅಂಕೆಗೆ ಸಿಗುತ್ತಿರಲಿಲ್ಲ

ಬಿಡು, ಜಗಳಗಳ ಲೆಕ್ಕವಿಟ್ಟಿಲ್ಲ
ಈಗ ಇಡದ ಲೆಕ್ಕಕ್ಕೆ ಮತ್ತೊಂದು ಸೇರದಿರಲಿ
ಇದ್ದಷ್ಟೂ ಹೊತ್ತು ಕಣ್ಣಲ್ಲಿ ಕಣ್ಣಿಟ್ಟು
ಹೇಳಲಾಗದವುಗಳನ್ನ ಹಂಚಿಕೊಳ್ಳೋಣ

ಲೆಕ್ಕ ತಪ್ಪಿದ ಬದುಕಿನ ಮೌಲ್ಯ ಮಾಪನದಲ್ಲಿ
ಉತ್ತೀರ್ಣರಾಗುವಷ್ಟು ಅಂಕಿ ಕೊಟ್ಟು
ಮತ್ತೆಂದೂ ಕಾಣಿಸಿಕೊಳ್ಳದಂತೆ
ಗಂಭೀರವಾಗಿ ಕಣ್ಣಾಮುಚ್ಚಾಲೆ ಆಟವಾಡೋಣ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩